ಪಕ್ಷಿಗಳು -
	ಶಾಸ್ತ್ರೀಯವಾಗಿ ಹೇಳುವುದಾದರೆ ಪಕ್ಷಿಯೆಂದರೆ ರೆಕ್ಕೆಯುಳ್ಳ ದ್ವಿಪಾದಿ. ಸಾಮಾನ್ಯ ದೃಷ್ಟಿಯಲ್ಲಿ ಹಾರಾಟ ಹಕ್ಕಿಯ ವಿಶೇಷ ಗುಣ. ಆದರೆ ಹಾರಲಾರದ ಪಕ್ಷಿಗಳೂ ಇವೆ.  (ಉದಾ: ಉಷ್ಟ್ರಪಕ್ಷಿ).  ಅಲ್ಲದೆ ಪಕ್ಷಿಗಳು ಮಾತ್ರವಲ್ಲದೆ ಬೇರೆ ಕೆಲವು ಪ್ರಾಣಿಗಳೂ ಹಾರಬಲ್ಲವು (ಉದಾ : ಬಾವಲಿಗಳು ಮತ್ತು ಕೀಟಗಳು).  ಆದ್ದರಿಂದ ಗರಿಗಳು  ಪಕ್ಷಿವರ್ಗದ ಮುಖ್ಯ ಲಕ್ಷಣ ಎನ್ನಬಹುದು.  ಇನ್ನಾವ ಪ್ರಾಣಿಗೂ ಗರಿಗಳಿಲ್ಲ,  ಮತ್ತು ಯಾವ ಹಕ್ಕಿಯೂ ಗರಿಗಳಿಲ್ಲದೇ ಇಲ್ಲ.

	ಪಕ್ಷಿಗಳು ಬಿಸಿರಕ್ತವುಳ್ಳ ಕಶೇರುಕ ಪ್ರಾಣಿಗಳು; ಸಸ್ತನಿಗಳೂ ಪಕ್ಷಿಗಳೂ ಉರಗಗಳಿಂದ ಉಗಮಿಸಿದುವು.  ಮೊದಲ ನೋಟದಲ್ಲಿ ಹಕ್ಕಿಗಳಿಗೂ ಉರಗಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲದಂತೆ ತೋರಿಬಂದರೂ ಸೂಕ್ಷ್ಮವಾಗಿ ಪರಿಶೀಲಿಸಿದರೆ ಈ ಎರಡು ಗುಂಪುಗಳ ದೇಹ ರಚನೆಯಲ್ಲಿ ಅನೇಕ ಹೋಲಿಕೆಗಳನ್ನು ಕಾಣಬಹುದು.  ಪಕ್ಷಿವರ್ಗ ಉರಗಜಾತಿಯ ಪೂರ್ವಜಗಳಿಂದ ಉದ್ಭವಿಸಿದೆಯೆಂಬುದಕ್ಕೆ ಆಧಾರ ಈ ಎರಡು ಗುಂಪುಗಳ ಅಸ್ಥಿಪಂಜರದ ಹೋಲಿಕೆಯಿಂದ ದೊರೆಯುತ್ತದೆ; ಉದಾಹರಣೆಗೆ ತಲೆಬುರುಡೆ ಬೆನ್ನುಮೂಳೆಯೊಂದಿಗೆ ಸೇರಿಕೊಂಡಿರುವ ರೀತಿ, ಸೊಂಟ ಮತ್ತು ಭುಜ್ ನಡುಕಟ್ಟುಗಳ ರಚನೆ ಮತ್ತು ಕೆಳಕಾಲುಗಳು.  ಬೇರೆ ಕಶೇರುಕ ಗುಂಪುಗಳ ಅಸ್ತಿತಂತ್ರದಲ್ಲಿ ಕಂಡುಬರದ ಇನ್ನೂ ಅನೇಕ ಹೋಲಿಕೆಗಳನ್ನು ಈ ಎರಡು ಪಂಗಡಗಳಲ್ಲಿ ನೋಡಹಬಹುದು.  ಅಲ್ಲದೆ ಪಕ್ಷಿಯ ರಕ್ತ ಉರಗ ರಕ್ತದಂತಿದೆ, ಅಂದರೆ ಮಿಕ್ಕೆಲ್ಲ ಕೀಳು ಕಶೇರುಕ ವರ್ಗಗಳಲ್ಲಿರುಂತೆ ಕೆಂಪು ರಕ್ತಕಣದಲ್ಲಿ ನೂಯಕ್ಲಿಯಸ್ ಉಳಿದುಕೊಂಡಿದೆ; ಸ್ತನಿಗಳ ರಕ್ತದಲ್ಲಾದರೊ ನ್ಯೂಕ್ಲಿಯಸ್ ಇರದು.  

	ರೂಪದಲ್ಲೂ ರಚನೆಯಲ್ಲೂ ಉರಗಜಾತಿಯ ಮೊಟ್ಟೆಗಳನ್ನು ಬಹಳ ಮಟ್ಟಿಗೆ ಹೋಲುವ ತತ್ತಿಗಳನ್ನು ಹಕ್ಕಿಗಳೂ ಇಡುತ್ತವೆ, ಮತ್ತು ಈ ಎರಡು ಗುಂಪುಗಳ ಭ್ರೂಣಗಳೂ ಒಂದು ಹಂತದವರೆಗೂ ಒಂದೇ ರೀತಿಯ ಬೆಳವಣಿಗೆಯನ್ನು ತೋರುವುವು.  ಬಹುತೇಕ ಹಕ್ಕಿಗಳಲ್ಲಿ ಕೆಳಕಾಲು ಮತ್ತು ಕಾಲ್ಬೆರಳುಗಳ ಮೇಲೆ ಉರಗಗಳಿಗಿರುವಂಥ ಹುರುಪೆಗಳಿವೆ.  ಮರಳು ಗೌಜಲು, ಹದ್ದು, ಗೂಬೆ ಮುಂತಾದ ಪಕ್ಷಿಗಳಲ್ಲಿ ಕಾಲುಗಳ ಮೇಲೆ ಗರಿಗಳಿರುವುದರಿಂದ, ಗರಿಗಳು ಮಾರ್ಪಾಡು ಹೊಂದಿದ ಹುರುಪೆಗಳೆಂದೂ, ಒಂದರ ಬದಲು ಇನ್ನೊಂದು ಇರುವುದು ಸಾಧ್ಯವೆಂದೂ ವೇದ್ಯವಾಗುತ್ತದೆ.  ಪಕ್ಷಿ ಜಾಗಿ ಉರಗ ಮೂಲದಿಂದ ಹುಟ್ಟಿದ್ದೆಂಬುದಕ್ಕೆ ಜುರಾಸಿಕ್ ಯುಗದ ಅಂದರೆ ಏಳು ಕೋಟಿ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಎರಡು ಹಕ್ಕಿಗಳ ಅವಶೇಷಗಳು ಇನ್ನೂ ಹೆಚ್ಚಿನ ಆಧಾರವನ್ನು ಒದಗಿಸುತ್ತವೆ ; ಇವರು ಉರಗ ವರ್ಗಕ್ಕೂ ಆಧುನಿಕ ಪಕ್ಷಿಗಳಿಗೂ ನಡುವಣ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಇವುಗಳಲ್ಲಿ ಕಾಗೆಯ ಗಾತ್ರದ ಆರ್ಕಿಯಾಪ್ಟೆರಿಕ್ಸ್ ಎಂಬುದು ಎರಡು ವಿಶೇಷ ಗುಣಗಳನ್ನು ಪಡೆದಿದೆ.  ಈ ಗುಣಗಳ ಪೈಕಿ ಒಂದು ವಿರ್ದಿಷ್ಟವಾಗಿ ಉರಗಜಾತಿಯದು. ಇನ್ನೊಂದು ಪಕ್ಷವರ್ಗದ್ದು.  ಇದರ ಮೊಟಕು ಕೊಕ್ಕಿನಲ್ಲಿ ಒಂದೊಂದೂ ತನ್ನ ಕುಳಿಯಲ್ಲಿ ಕೂತಿರುವ ಹಲ್ಲುಗಳುಂಟು; ಇವು ಮಗ್ರ್ಯಾನ್ಸರ್ ಮತ್ತು ಇಂದಿನ ಮತ್ಸ್ಯಾಹಾರಿ ಬಾತುಗಳ ಕೊಕ್ಕುಗಳಲ್ಲಿರುವ ಕೊಂಬಿನ ರಚನೆಗಳಂತಿಲ್ಲ. ಇದರ ಬಾಲ ಉರಗದ ಬಾಲದಂತೆ ಉದ್ದವಾಗಿ ತುದಿಯಲ್ಲಿ ಕಿರಿದಾಗಿದ್ದು, ಅನೇಕ ಬೆನ್ನೆಲುಬುಗಳಿಂದ ಕೂಡಿದ್ದು ಎರಡು ಪಕ್ಕಗಳಲ್ಲೂ ನಿಜವಾದ ಗರಿಗಳ ಕುಚ್ಚುಗಳಿಂದ ಕೂಡಿದೆ. ಆಧುನಿಕ ಹಕ್ಕಿಯಲ್ಲದರೋ ಬಾಲದ ಎಲುಬುಗಳೆಲ್ಲ ಒಂದಾಗಿ ಕೂಡಿಕೊಂಡು, ಬೀಸಣಿಗೆ ಆಕಾರದ ಬಾಲದ ಗರಿಗಳನ್ನು ಹೊರುವ ಪೈಗೋಸ್ಟೈಲ್ ಎಂಬ ಮೂಳೆಯ ಹಲಗೆಯಾಗಿ ಬದಲಾವಣೆ ಹೊಂದಿದೆ.  ಆರ್ಕಿಯಾಪ್ಟೆರಿಕ್ಸನ ರೆಕ್ಕೆ ಮತ್ತು ಕಂಕಾಲದ ಲಕ್ಷಣಗಳು ಅದು ಈಚಿನ ಪಕ್ಷಿಯ ಪೂರ್ವಜರೆಂಬುದನ್ನು ಸಂದೇಹಕ್ಕೆ ಆಸ್ಪದವಿಲ್ಲದಂತೆ ತೋರಿಸುತ್ತವೆ.  ವಿಕಾಸಗೊಳ್ಳುತ್ತಿರುವ ಪಡ್ಷಜಾತಿಯ ಇನ್ನಾವ ಅವಶೇಷಗಳೂ ಆರ್ಕಿಯಾಪ್ಟೆರಿಕ್ಸ್ ಹೊರತು, ಕ್ರಿಟೇಷಸ್ ಯುಗದ ಹಿಂದೆ ಅಥವಾ ಮುಂದೆ ದೊರೆತಿಲ್ಲ.  ಹಕ್ಕಿಯ ಮೂಳೆ ಮತ್ತು ಗರಿಗಳ ಸೂಕ್ಷ್ಮ ಮತ್ತು ನಶಿಸುವ ಸ್ವಭಾವವನ್ನು ನೋಡಿದಾಗ ಹಾಗೂ ಪಕ್ಷಿಗಳ ಅವಶೇಷಗಳು ಉಳಿಯಬೇಕಾದರೆ ವಿಶೇಷ ಸನ್ನಿವೇಶವಿರಬೇಕೆಂಬುದನ್ನು ಗಣನೆಗೆ ತೆಗೆದುಕೊಂಡಾಗ ಇದು ಆಶ್ವರ್ಯವೇನಿಲ್ಲವೆಂಬುದು ವೇದ್ಯವಾಗುತ್ತದೆ.

	ಗರಿಗಳು : ಹಕ್ಕಿಯ ದೇಹದ ಮೇಲೆ ಹೊದಿಕೆಯಂತಿರುವ ಗರಿಗಳಿಂದಾಗಿ ಒಂದೇ ಸಮವಾದ ಉಷ್ಣತೆ ಇರುವಂತಾಗಿದೆ.  (ಈ ಉಷ್ಣತೆ ಸ್ತನಿಗಳಿಗಿಂತ ಹೆಚ್ಚು, ಅಂದರೆ ಸುಮಾರು 39 ಡಿ.ಸೆ. ರಿಂದ 45 ಡಿ.ಸೆ.).  ಗರಿಗಳ ರಚನೆ ಮತ್ತು ಜೋಡಣಾವಿನ್ಯಾಸ ಬೇರೆ ಬೇರೆ ಗುಂಪುಗಳ ಜೀವನ ರೀತಿಯನ್ನು ಪ್ರತಿಬಿಂಬಿಸುತ್ತವೆ.  ಬಾತುಗಳು ಮತ್ತಿತರ ನೀರುಹಕ್ಕಿಗಳಲ್ಲಿ ಗರಿಗಳು ದಪ್ಪ, ಮೃದುವಾಗಿದ್ದು ಎಣ್ಣೆಯಿಂದ ಸಜ್ಜಿತವಾಗಿವೆ;  ಆಸ್ಟ್ರೇಲಿಯದ ದೊಡ್ಡ ಗಾತ್ರದ, ಉಷ್ಟ್ರಪಕ್ಷಿಯನ್ನು ಹೋಲುವ ಹಾರಾಡದ ಹಕ್ಕಿ ಕ್ಯಾಸೋವರಿಯ ಗರಿಗಳು ಕೂದಲಿನಂತೆ ಇದ್ದು ಎರಡು ತುದಿಗಳಲ್ಲಿಯೂ ಮೊನಚಾಗಿವೆ.  ಈ ಹಕ್ಕಿ ಮತ್ತು ಉಷ್ಟ್ರಪಕ್ಷಿ, ಈಮ್ಯೂ, ಪೆಂಗ್ವಿನ್‍ಗಳಲ್ಲಿ ದೇಹಾದ್ಯಂತ ಹೆಚ್ಚು ಕಡಿಮೆ ಒಂದೇ ರೀತಿಯ ಗರಿ ಇದೆ; ಮಿಕ್ಕೆಲ್ಲ ಹಕ್ಕಿಗಳಲ್ಲಿ ಗರಿಗಳ ಬೆಳವಣಿಗೆ ಮೈಮೇಲಿನ ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತಗೊಂಡಿದೆ; ಈ ಜಾಗಗಳಲ್ಲಿ ಹುಟ್ಟಿದ ಗರಿಗಳು ಅಕ್ಕಪಕ್ಕಗಳಿಗೆ ಪಸರಿಸಿ ಗರಿರಹಿತ ಪ್ರದೇಶಗಳನ್ನು ಮುಚ್ಚುತ್ತವೆ, ಪಕ್ಷಿಗಳ ವರ್ಗೀಕರಣದಲ್ಲಿ ಗರಿಗಳ ಉತ್ಪತ್ತಿ, ಪ್ರದೇಶಗಳ ಅಧ್ಯಯನ ಮುಖ್ಯವಾದದ್ದು.

	ಗರಿಗಳು ಮೂರು ತರಹ :  1.  ಸಾಮಾನ್ಯ ಮೈ ಹೊದಿಕೆ ಗರಿಗಳು :  ಇವು ದೇಹಾದ್ಯಂತ ಹೊದಿಕೆಯಂತಿರಬಹುದು.  ಹಾರಾಟದ ಗರಿಗಳಾಗಿರಬಹುದು ಅಥವಾ ಬಾಲದ ಗರಿಗಳಾಗಿದ್ದು ಹಾರಾಟದ ದಿಕ್ಕನ್ನು ನಿರ್ಧರಿಸಲು ಮತ್ತು ಹಾರಾಟವನ್ನು ಮುಕ್ತಾಯ ಮಾಡಲು ಸಹಾಯಕವಾಗುವುವು.
ಮೃದುವಾದ ಒಳಮೈ ಪುಕ್ಕಗಳು :  ಮರಿಗಳಲ್ಲಿ ಮಾತ್ರ ಇರಬಹುದು ಅಥವಾ ಹಕ್ಕಿಯ ಜೀವಮಾನವೆಲ್ಲ ಇರಬಹುದು. ಮೈಹೊದಿಕೆ ಗರಿಗಳಿಂದ ಆವೃತವಾಗಿರುವುವು.  ಇವನ್ನು ಒಳ ಉಡುಪಿಗೆ ಹೋಲಿಸಬಹುದು.  
ಕೂದಲಿನಂಥ ಗರಿಗಳು :  ಮಿಕ್ಕ ಗರಿಗಳನ್ನು ಕಿತ್ತು ತೆಗೆದ ಹೊರತು ಇವು ಗೋಚರಿಸುವುದಿಲ್ಲ.
ಗರಿಯ ಮುಖ್ಯ ಭಾಗಗಳು :  ಕಾಂಡ ಅಥವಾ ಪಕ್ಷದಂಡ ಮತ್ತು ಪಕ್ಷದಂಡದ ಇಕ್ಕೆಡೆಗಳಲ್ಲೂ ಪಸರಿಸಿಕೊಂಡು ಒಳ ಮತ್ತು ಹೊರಮುಖಗಳನ್ನೊಳಗೊಂಡ ವೇನ್.

	ಗರಿಯ ವೇನ್ ಭಾಗ ಅಸಂಖ್ಯಾತವಾದ ಬಾರ್ಬ್‍ಗಳೆಂಬ ಪಕ್ಕದ ಕವಲುಗಳಿಂದ ಕೂಡಿದೆ.  ಈ ಕವಲುಗಳು

	ಬ್ರ್ಯೂಲ್‍ಗಳೆಂಬ ಅಡ್ಡಕವಲುಗಳ ಶ್ರೇಣಿಗಳ ಮೂಲಕ ಒಂದಕ್ಕೊಂದು ಹೊಂದಿಕೊಂಡಿವೆ; ಬಾರ್ಬಿಸೆಲ್ಗಳೆಂಬ ಪರಸ್ಪರ ಅಂಟಿಕೊಂಡಿರುವ ಸೂಕ್ಷ್ಮ ರೋಮಗಳ ಸಹಾಯದಿಂದ ಈ ಜೋಡಣೆ ಉಂಟಾಗುತ್ತÀದೆ.  ಬಾರ್ಬ್ ಕವಲುಗಳು ಪಕ್ಷದಂಡದ ಎರಡು ಪಕ್ಕಗಳಿಗೂ ಚಾಚಿಕೊಂಡಿರುವ ಉದ್ದನೆಯ, ನಾಜೂಕಾದ ಹಲಗೆಗಳಂತಿವೆ; ಇವು ಗರಿಯ ತುದಿಯ ಕಡೆಗೆ ಕಿರಿದಾಗುವವು.  ಗರಿ ಸಮುದಾಯದ ಮುಖ್ಯ ಕ್ರಿಯೆ ದೇಹದ ಉಷ್ಣತೆಯನ್ನು ಕಾಪಾಡುವುದು ಮತ್ತು ಹಾರಾಟಕ್ಕೆ ಸಹಾಯಕವಾಗುವುದು.  ಉಪಯುಕ್ತತೆ ಮತ್ತು ಅಲಂಕಾರ ದೃಷ್ಟಿಯಿಂದ ಇವು ಹೆಚ್ಚಿನ ಮಾರ್ಪಾಡುಗಳನ್ನು ಪ್ರದರ್ಶಸುತ್ತವೆ.  ಕಳ್ಳಿಪೀರ ಹಕ್ಕಿಯಲ್ಲಿ ಸೂಜಿ ತುದಿಯಂತೆ ಮೊನಚಾಗಿರುವ, ನೊಣ ಹಿಡುಕ ಪಕ್ಷಿಯಲ್ಲಿ ತೆಳ್ಳನೆಯ ಪಟ್ಟಿಯಂತಿರುವ ತಂತಿ ಬಾಲದ ಸ್ವಾಲೋ ಹಕ್ಕಿಯಲ್ಲಿ ತೆಳುವಾದ ತಂತಿಯಂತಿರುವ ಉದ್ದನೆಯ ಬಾಲಗಳು ಈ ವೈವಿಧ್ಯಕ್ಕೆ ಕೆಲವು ಉದಾಹರಣೆಗಳು.  ಆಡ್ಜುಟಂಟ್ ಕೊಕ್ಕರೆಯ ಬಾಲದ ಕೆಳಗಿನ ಮೃದುವಾದ ಹತ್ತಿ ಎಳೆಯಂಥ ಗರಿಗಳು, ಬೆಳ್ಳಕ್ಕಿಗಳು (ಈಗ್ರಟ್) ಸಂತಾನಾಭಿವೃದ್ಧಿಯ ಕಾಲದಲ್ಲಿ ಬೆನ್ನು ಮತ್ತು ಎದೆಯ ಮೇಲೆ ಧರಿಸುವ ನವುರಾದ ರೇಷ್ಮೆಯಂಥ ಪುಕ್ಕಗಳು  ಈ ಗರಿ ಹೊದಿಕೆ ಅಲಂಕಾರಕ್ಕಾಗಿ ಅನೇಕಾನೇಕ ರೂಪ ತಾಳುವುದರ ಇನ್ನು ಕೆಲವು ಉದಾಹರಣೆಗಳು.  ಮರುಕುಟಿಗನ ಬಿರುಸು ಮತ್ತು ಮೊನಚಾದ ಬಾಲದ ಗರಿಗಳು  ಆ ಹಕ್ಕಿ ಆಹಾರವನ್ನು ಹುಡುಕಿಕೊಂಡು ಮರದ ಕಾಂಡವನ್ನು ಹತ್ತುವಾಗ ತ್ರಿಪಾದದ ಸಲಕರಣೆಯಂತೆ ಅದಕ್ಕೆ ಊರೆ ಕೊಡುತ್ತವೆ.  ರೆಕ್ಕೆ ಮತ್ತು ಬಾಲದ ಗರಿಗಳು ಹಕ್ಕಿಯ ಹಾರಾಟದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.  ನಿಸರ್ಗದಲ್ಲಿ ಬೇರೆ ಯಾವ ಸಾಧನದಲ್ಲೂ ಈ ಮಟ್ಟದಲ್ಲಿ ಕಾಣದಿರುವ ಕ್ರಿಯಾಶಕ್ತಿ, ಸ್ಥಿತಿ ಸ್ಥಾಪಕತ್ವ ಮತ್ತು ಅತ್ಯಲ್ಪ ತೂಕ, ಇವುಗಳ ಪರಾಕಾಷ್ಠೆಯನ್ನು ಪಕ್ಷಿಗಳ ಗರಿ ಕವಚದಲ್ಲಿ ನೋಡಬಹುದು.

	ಎಲ್ಲ ಹಕ್ಕಿಗಳೂ ವರ್ಷಕ್ಕೊಮ್ಮೆ, ಮುಖ್ಯವಾಗಿ ಸಂತಾನೋತ್ಪತ್ತಿ ಸಮಯದ ಅನಂತರ ಗರಿ ಹೊದಿಕೆಯನ್ನು ಕಳಚಿ, ಬೇರೆಯದನ್ನು ತೊಡುವುವು.  ಕೆಲವು ಹಕ್ಕಿಗಳಲ್ಲಿ ಮೈ ಹೊದಿಕೆ ಸಂತಾನೋತ್ಪತ್ತಿಗೆ ಮುಂಚೆಯೇ ಬದಲಾಗಬಹುದು; ಹೆಣ್ಣಿಗೂ ಗಂಡಿಗೂ ರೂಪ ವ್ಯತ್ಯಾಸವಿರುವ ಜಾತಿಗಳಲ್ಲಿ ಗಂಡು ಹಕ್ಕಿ ಹೊಳೆಯುವ ಬಣ್ಣಗಳಿಂದ ಕೂಡಿದ ಗರಿ ಹೊದಿಕೆ ಮತ್ತು ವಿಶೇಷ ಗರಿಗಳನ್ನು ಪಡೆಯುವುದು.  ಹೆಣ್ಣು ಹಕ್ಕಿಯ ಗಮನವನ್ನು ಸೆಳೆಯುವುದಕ್ಕಾಗಿ ಇವನ್ನು ಉಪಯೋಗಿಸಿಕೊಳ್ಳುವುದು.

	ಹಕ್ಕಿಗಳ ಗರಿಗಳ ಬಣ್ಣ ಮೂರು ರೀತಿಯಲ್ಲಿ ಉತ್ಪತ್ತಿಯಾಗುತ್ತದೆ ; 1.  ವರ್ಣಕಗಳಿಂದ,  2.  ಭೌತಿಕ ರಚನೆಯಿಂದ,  3.  ವರ್ಣ ಮತ್ತು ರಚನೆಕೂಡಿ.  ಕಪ್ಪು, ಕೆಂಪು, ಕಂದು, ಹಳದಿ, ಕಿತ್ತಳೆ ಬಣ್ಣಗಳು ವರ್ಣಗಳಿಂದ ಉಂಟಾಗುವಂಥವು.  ಈ ವರ್ಣಕಗಳು ಬೆಳಕಿನ ಕೆಲವು ನಿರ್ದಿಷ್ಟ ತರಂಗಗಳನ್ನು ಹೀರಿಕೊಂಡು ಮಿಕ್ಕವನ್ನು ಹೊರ ಸೂಸುವಂಥ ರಾಸಾಯನಿಕ ವಸ್ತುಗಳು.  ಇದರಿಂದ ನಮ್ಮ ದೃಷ್ಟಿಗೆ ಬಣ್ಣದ ಅರಿವು ಉಂಟಾಗುತ್ತದೆ.   ಹಕ್ಕಿಗಳ ಪುಕ್ಕಗಳಲ್ಲಿರುವ ಸಾಮಾನ್ಯವಾದ ವರ್ಣಕಗಳೆಂದರೆ ಮೆಲಾನಿನ್ ಮತ್ತು ಕ್ಯಾರೋಟಿನ್.  ನೀಲಿ ಮತ್ತು ಬಿಳಿ ಬಣ್ಣಗಳು ಎಂದಿಗೂ ವರ್ಣಕಕ್ಕೆ ಸಂಬಂಧಿಸಿದ ಬಣ್ಣಗಳಲ್ಲ, ಹಾಗೆಯೇ (ಆಫ್ರಿಕೆಯ ಕದಳೀಫಲ ಭಕ್ಷಕ ಹಕ್ಕಿಗಳಲ್ಲಿ ಹೊರತು)  ಹಸಿರು ಬಣ್ಣ ಕೂಡ ವರ್ಣಕಗಳಿಂದ ಉಂಟಾಗುವಂಥದಲ್ಲ.  ಈ ಪಕ್ಷಿಗಳ ಗರಿಗಳಲ್ಲಿ ಟಕೋವರ್ಡಿನ್ ಎಂಬ ವಿಶೇಷ ಹಸಿರು ವರ್ಣಕವಿರುವುದಲ್ಲದೆ,  ಟ್ಯೂರಾಸಿನ್ ಎಂಬ ವಿಚಿತ್ರ ರೀತಿಯ ಕೆಂಪು ವರ್ಣಕವೂ ಇದೆ ; ಇದು  ನೀರಿನಲ್ಲಿ ಸುಲಭವಾಗಿ ಕರಗಿಹೋಗುತ್ತದೆ.  ಹೀಗಾಗಿ ಪ್ರತಿಸಲ ಹೊಸದಾಗಿ ಪುನರುತ್ಪತ್ತಿಯಾಗುವುದು.  ಬೆಳೆಯುತ್ತಿರುವ ಗರಿಯಲ್ಲಿ ಮಾತ್ರ ರಕ್ತಚಲನೆಯ ಮೂಲಕ ವರ್ಣಕ  ಪ್ರಭಾವ ಬೀರಬಲ್ಲುದು ; ಗರಿ ಪೂರ್ತಿ ಬೆಳೆದ ಮೇಲೆ ಹೊರ ವಾತಾವರಣಕ್ಕೆ ಈಡಾಗುವುದರ ಫಲವಾಗಿ ಅದರ ಬಣ್ಣ ಮಲಿನಗೊಳ್ಳಬಹುದು.  ಅಥವಾ ವಿವರ್ಣವಾದ ಅಂಚುಗಳು ತೆರೆದಂತಾಗುವುದರಿಂದ ಕಪ್ಪು ಛಾಯೆ ಹೊಂದಬಹುದು.  ಆದರೆ ಇನ್ನೊಂದು ಬಣ್ಣಕ್ಕೆ ಎಂದಿಗೂ ತಿರುಗಲಾರದು.

	ಭೌತಿಕ ರಚನೆಯ ಬಣ್ಣಗಳು ಬೆಳಕಿನ ತತ್ತ್ವದ ಆಧಾರದ ಮೇಲೆ ನಿಂತಿವೆ ; ಗರಿಗಳಲ್ಲಿ ಯಾವ ಬಣ್ಣವೂ ಇರುವುದಿಲ್ಲ, ಆದರೆ ಅವುಗಳ ಮೇಲ್ಮೈ ನುಣುಪಾಗಿರದೆ, ಅಸಂಖ್ಯಾತ ಮತ್ತು ಅತ್ಯಂತ ಸೂಕ್ಷ್ಮವಾದ ಉಬ್ಬು ತಗ್ಗುಗಳಿಂದ ಕೂಡಿದೆ.  ಇವುಗಳ ಮೇಲೆ ಬೀಳುವ ಬೆಳಕು ರೋಹಿತದ ವಿವಿಧ ವರ್ಣಗಳಾಗಿ ಒಡೆಯುತ್ತದೆ.  ಗರಿಯಲ್ಲಿ ವರ್ಣಕವೂ ಇದ್ದು ಜೊತೆಗೆ ಮೇಲೆ ಹೇಳಿದಂತೆ ಮೇಲ್ಮೈ ಇಡಕು ದೆಡಕುಗಳಿಂದ ಕೂಡಿದ್ದರೆ, ಗಂಡು ನವಿಲಿನ ಬಾಲದ ಗರಿಗಳಲ್ಲಿ ಕಾಣವಂಥ ಥಳಥಳನೆ ಮಿರುಗುವ ಹೊಳಪು ಉಂಟಾಗುತ್ತದೆ.  ಭಾರತದಲ್ಲಿ ಬಹಳ ಸಾಮಾನ್ಯವಾಗಿರುವ ಊದಾಬಣ್ಣದ ಸೂರಕ್ಕಿಯ ಗಂಡು ಹಕ್ಕಿಯಲ್ಲಿ ಬಣ್ಣದ ಈ ಮೂರು ಬಗೆಗಳೂ ಇವೆ.  ಲೋಹೀಯವಾಗಿ ಹೊಳೆಯುವ ಇದರ ಗರಿಗುಚ್ಛದ ಭಾಗಗಳಲ್ಲಿ ಹರಳಿನ ರಚನೆಯಂತ ಉಬ್ಬುತಗ್ಗುಗಳೊಂದಿಗೆ ವರ್ಣಕಗಳು ಬೆರೆತಿರುವುವು ; ರೆಕ್ಕೆಗಳಲ್ಲಿರುವ ಮಬ್ಬು ಕಪ್ಪು, ಕಂದು ಬಣ್ಣ ಮತ್ತು ಎದೆಭಾಗದ ಕೆಂಪು ಗುಚ್ಛಗಳು ವರ್ಣಕಗಳಿಂದ ಮಾತ್ರ ಉಂಟಾಗಿವೆಯಾದರೆ ಎದೆಯ ಹಳದಿ ಗುಚ್ಛಗಳಿಗೆ ಅವುಗಳ ವಿಶೇಷ ರಚನಯೇ ಕಾರಣ.

	ಕೊಕ್ಕುಗಳು : ಆಹಾರವನ್ನು ಸೇವಿಸುವುದಕ್ಕೆ ಹೊಂದಿಕೆಯಾಗಿರುವಂತೆ ನೇರವಾಗಿ ಮಾರ್ಪಾಟಾಗಿರುವ ಆಕಾರ, ಗಾತ್ರಗಳ ವೈವಿಧ್ಯದಿಂದ ಕೂಡಿರುವ ಕೊಕ್ಕುಗಳನ್ನು ಪಕ್ಷಿವರ್ಗದಲ್ಲಿ ಕಾಣಬಹುದು.  ಉಗುರು, ಕಾಲಿನ ಮೇಲಿರುವ ಗೊಂಡೆಗಳು ಮತ್ತು ಕೆಳಕಾಲಿನ ಹುರುಪೆಗಳಂತಿರುವ ಕೊಂಬಿನ ಹೊದಿಕೆ ಕೊಕ್ಕಿನ ಎಲುಬಿನ ಮೇಲೂ ಉಂಟು.  ಇದು ತುದಿಯಲ್ಲಿ ಸವೆಯುತ್ತ ಬಂದಂತೆ ಬುಡದಿಂದ ಬೆಳೆಯುತ್ತಲೇ ಇರುತ್ತದೆ.  ಕೆಲವು ಹಕ್ಕಿಗಳಲ್ಲಿ ಕೊಕ್ಕಿನ ಮೇಲೆ ಇರುವ ಹೊಳೆಯುವು ಬಣ್ಣದ ಹೊದಿಕೆ ಸಂತಾನೋತ್ಪತ್ತಿ ಕಾಲದ ತರುವಾಯ ಕಳಚಿಹೋಗುತ್ತದೆ.  (ಉದಾ : ಪಫಿನ್ ಹಕ್ಕಿ).  ಕೊಕ್ಕುಗಳ ಕೆಲವು ಮುಖ್ಯ ವಿಧಗಳನ್ನು ಕೆಳಗೆ ಉದಾಹರಿಸಲಾಗಿದೆ.  ಮಾಂಸವನ್ನು ಹರಿಯಲು ಉಪಯುಕ್ತವಾಗಿರುವ ಹರಿತವಾದ ಮತ್ತು ತುದಿಯಲ್ಲಿ ಕೊಕ್ಕೆಯಂತಿರುವ ಕೊಕ್ಕನ್ನು ಕೆಲವು ಹಕ್ಕಿಗಳಲ್ಲಿ ಕಾಣಬಹುದು.  ಮಾಂಸವನ್ನು ಕೀಳಲು ಸಹಾಯಕವಾಗಿರುವ ವಿಶೇಷ ರೀತಿಯ ಪಾದಗಳು ಮತ್ತು ನಖಗಳೂ ಇವುಗಳಲ್ಲಿ ಉಂಟು.  ಉದಾ : ಗುಡುಗ, ಗೂಬೆ, ಹದ್ದು, ಗಿಣಿಯ ಕೊಂಕಿದ ಕೊಕ್ಕು, ಭಿನ್ನ ಜೀವನ ರೀತಿಯುಳ್ಳ ಪ್ರಾಣಿಗಳು ಏಕರೀತಿಯಲ್ಲಿ ವಿಕಸನಗೊಂಡಿವೆ ಎಂಬುದಕ್ಕೆ ಉದಾಹರಣೆ.  ಪಕ್ಷಿಗಳನ್ನು ಹೊರರೂಪದ ಆಧಾರದ ಮೇಲೆಯೇ ವಿಂಗಡಿಸುವುದು ತಪ್ಪೆಂಬುದಕ್ಕೆ ಇದು ನಿದರ್ಶನವಾಗಿದೆ.  ವಿಶೇಷ ತೆರನ ಆಹಾರ ಮತ್ತು ಆಹಾರ ಸೇವನೆಯ ಕ್ರಮಗಳಿಗೆ ಅನುಗುಣವಾದ ಕೊಕ್ಕುಗಳ ಉದಾಹರಣೆಯಾಗಿ ಬಾತುಗಳ ಚಪ್ಪಟೆ ಕೊಕ್ಕನ್ನು ಪ್ರಸ್ತಾಪಿಸಬಹುದು.  ಇದರ ಅಂಚುಗಳಲ್ಲಿ ಬಾಚಣಿಗೆಯ ಹಲ್ಲುಗಳಂಥ ರಚನೆಗಳಿದ್ದು ಆಹಾರದೊಂದಿಗೆ ಸೇವಿಸಿದ ನೀರನ್ನು ಹೊರಬಿಡಲು ಉಪಯುಕ್ತವಾಗಿವೆ.  ರಾಜಹಂಸದ (ಫ್ಲೆಮಿಂಗೋ) ಕೊಕ್ಕು ಕೆಳಮುಖವಾಗಿ ಬಾಗಿದೆ ಮತ್ತು ಬಾತಿನಲ್ಲಿರುವಂತೆ ಉಪ್ಪುನೀರು ಮತ್ತು ಕೆಸರಿನಲ್ಲಿಕೊರೆಯುವ ಆಹಾರದ ಸೂಕ್ಷ್ಮ ತುಣುಕುಗಳನ್ನು ನೀರಿನಿಂದ ಬೇರ್ಪಡಿಸಲು ಜರಡಿಯಂಥ ಏರ್ಪಾಟನ್ನು ಒಳಗೊಂಡಿದೆ.  ಇನ್ನೊಂದು ಸಾಮಾನ್ಯ ತೆರನ ಕೊಕ್ಕನ್ನು ಗುಬ್ಬಚ್ಚಿ, ಫಿಂಚ್ ಮತ್ತು ಗೀಜಗ ಹಕ್ಕಿಯಲ್ಲಿ ಕಾಣಬಹುದು.  ಬೀಜ ಮತ್ತು ಧಾನ್ಯವನ್ನು ಜಜ್ಜಲು ಉಪಯುಕ್ತವಾದ ದಢೂತಿಯಾದ ಮತ್ತು ಶಂಕುವಿನ ಆಕಾರದ ಕೊಕ್ಕು ಇದು.  ನೀರಿನಲ್ಲಿ ನಡೆದು ಹೋಗುವ ಹಕ್ಕಿಗಳಲ್ಲಿ ಉದ್ದವಾದ ತೆಳ್ಳನೆ  ಕೊಕ್ಕುಗಳೂಂಟು, ಇವು ನೆಟ್ಟಗಿರಬಹುದು ಇಲ್ಲವೆ ಬಾಗಿಕೊಂಡಿರಬಹುದು.  ಕೊಚ್ಚೆಯಲ್ಲಿರುವ ಹುಳು ಮತ್ತು ಮೃದ್ವಂಗಿಗಳನ್ನು ಆರಿಸಿಕೊಳ್ಳಲು ಇವು ಉಪಯುಕ್ವತವಾಗಿವೆ.  ಮಂಗಟ್ಟೆ ಹಕ್ಕಿಗಳು (ಹಾರ್ನಬಿಲ್ಸ್) ಮೇಲ್ಭಾಗದಲ್ಲಿ ಟೊಳ್ಳಾದ ಎಲುಬಿನ ಗುಬುಟುಳ್ಳ ವಿಕಾರವೆನಿಸುವಷ್ಟು ದಪ್ಪಗಾತ್ರದ ಕೊಕ್ಕನ್ನು ಪಡೆದಿವೆ :  ಈ ಗುಬುಟಿನ ಉದ್ದೇಶವೇನೆಂಬುದು ಗೊತ್ತಾಗಿಲ್ಲ,  ಜಲವಾಸಿ ಸ್ಕಿಮ್ಮರ್ ಪಕ್ಷಿಯ ಕೊಕ್ಕಿನ ಮೇಳಿನ ಕೆಳಗಿನ ಭಾಗಗಳೆರಡೂ ಕತ್ತಿಯ ಅಲಗಿನಷ್ಟು ತೆಳ್ಳಗೆ ಪಕ್ಕದಿಂದ ಪಕ್ಕಕ್ಕೆ ಅದುಮಿದಂತಿದೆ.  ಮೇಲಿನ ಭಾಗ ಕೆಳಗಿನಭಾಗಕ್ಕಿಂತ ಬಹಳ ಮೋಟಾಗಿದೆ.  ಈ ಪಕ್ಷಿ ನೀರಿನ ಮೇಲೆ ತೇಲಿಹೋಗುತ್ತಿರುವಂತೆ ಹಾರುವಾಗ, ಕೊಕ್ಕಿನ ಕೆಳಾರ್ಧ ಭಾಗ ನೀರನ್ನು ಭೇದಿಸುತ್ತದೆ ಮತ್ತು ಆಗ ಮೇಲೇಳುವ ಸಣ್ಣ ಮೀನುಗಳನ್ನು ಹೆಕ್ಕಿ ನುಂಗುತ್ತದೆ.

	ಕೊಕ್ಕು ಮತ್ತು ನಾಲಗೆಗಳು ಆಹಾರ ಸೇವನೆಯಲ್ಲಿ ಪರಸ್ಪರ ಪೂರಕವಾಗಿವೆ.  ಮಕರಂದವನ್ನು ಉಂಡು ಬದುಕುವ ಸೂರಕ್ಕಿಗಳಲ್ಲಿ ಹೂವನ್ನು ಒಳಹೊಕ್ಕು ಶೋಧಿಸಲು ಉಪಯುಕ್ತವಾದ ತೆಳ್ಳನೆಯ ಡೊಂಕಾದ ಕೊಕ್ಕು ಮತ್ತು ಮಕರಂದವನ್ನುಹೀರಲು ಸಹಾಯಕವಾದ ಕೊಳವೆಯಂಥ ನಾಲಗೆ ಉಂಟು.  ಮರದ ಕಾಂಡಗಳಲ್ಲಿರುವ ಕೀಟಗಳನ್ನೂ ಅವುಗಳ ಮರಿಹುಳುಗಳನ್ನೂ ಅಗೆದು ತಿನ್ನಲು ಸಹಾಯಕವಾದ ದಪ್ಪ ಮತ್ತು ಉಳಿ ಆಕಾರದ ಕೊಕ್ಕುಗಳನ್ನು ಮರಕುಟಿಕಗಳಲ್ಲಿ ಕಾಣಬಹುದು.  ಇವುಗಳ ನಾಲಗೆ ಉದ್ದವಾಗಿದ್ದು ಹೊರಗೆ ಚಾಚಿಕೊಳ್ಳತ್ತದೆ.  ಇದರ ಆಕಾರ ಹುಳುವಿನಂತೆ.  ಅಲ್ಲದೆ ನಾಲಗೆಯ ತುದಿಯಲ್ಲಿ ಗಡುಸಾದ ಮುಳ್ಳು (ಬಾರ್ಬ) ಉಂಟು.  ಪೊಟರೆಗಳಲ್ಲಿರುವ ಕೀಟಗಳನ್ನು ಚುಚ್ಚಿ ಹೊರಕ್ಕೆ ಎಳೆಯಲು ಇದು ಉಪಯುಕ್ತವಾಗಿದೆ.

	ರೆಕ್ಕೆಗಳು : ಪಕ್ಷಿಯ ಮುಂಗಾಲಿನ (ರೆಕ್ಕೆಯ) ಎಲುಬುಗಳು ಮನುಷ್ಯನ ಮುಂಗೈಯ ಎಲುಬುಗಳಂತೆಯೇ ಇವೆಯಾದರೂ ಮೊಣಕೈ ಮತ್ತು ಹಸ್ತದ ಮೂಳೆಗಳು ಬಹಳ ಮಟ್ಟಿಗೆ ಒಟ್ಟಿಗೆ ಕೂಡಿಕೊಂಡು ಬಲವನ್ನೂ ಗಡಸುತನವನ್ನೂ ಒದಗಿಸಿವೆ.  ತೋಳಿಗೆ ಮತ್ತು ಕೈಗೆ ಅಂಟಿಕೊಂಡಿರುವ ಗರಿಗಳು ಪಕ್ಷಿಯ ಹಾರಾಟದಲ್ಲಿ ನೆರವಾಗುತ್ತವೆ.  ಇಂದಿನ ಜೀವಂತ ಪಕ್ಷಿಗಳಲ್ಲಿ ಅತ್ಯಂತ ದೊಡ್ಡ ಪಕ್ಷಿಯಂದರೆ ದಕ್ಷಿಣಧ್ರುವ ಸಮುದ್ರದ ಆಲ್ಬಟ್ರಾಸ್ ; ಇದರ ಪಸರಿಸಿದ ರೆಕ್ಕೆಗಳ ಹರವು 335 ಸೆ.ಮೀ. ಇರುವುದುಂಟು.  ಇದರ ತೂಕ 25 ಕೆ.ಜಿ. ಅತ್ಯಂತ ಹಿರಿದಾದಹಕ್ಕಿ ಪಶ್ಚಿಮಾರ್ಧಗೋಳದ ಚಿಕ್ಕ ಝೇಂಕಾರ ಪಕ್ಷಿ.  ಇದರ ರೆಕ್ಕೆಯ ಹರವು ಸುಮಾರು 85 ಮೀಮೀ. ತೂಕ ಕೇವಲ 2 ಗ್ರಾಂ.  ಹಕ್ಕಿಗಳ ಹಾರಾಟದ ವೇಗಸಹಜವಾಗಿಯೆ ಅವುಗಳ ಪ್ರಭೇದ ಮತ್ತು ಹಾರುವಾಗಿನ ಹವಾಗುಣಗಳನ್ನು ಅವಲಂಬಿಸುತ್ತದೆ.  ಮಧ್ಯಮ ಗಾತ್ರದ ಹಕ್ಕಿಗಳು ಗಂಟೆಗೆ ಸುಮಾರು 30-40 ಮೈಲಿಗಳು ಹಾರಬಲ್ಲವು.  ವಿಶೇಷ ಸಂದರ್ಭಗಳಲ್ಲಿ ಮತ್ತು ಕಡಿಮೆ ದೂರ ಮಾತ್ರ ಇದಕ್ಕೂ ಹೆಚ್ಚಿನ ವೇಗದಲ್ಲಿ ಪಕ್ಷಿಗಳು ಹಾರಬಲ್ಲವು. ಉದಾಹರಣೆ ಗಿಡುಗ ತನ್ನ ಬೇಟೆಯ ಮೇಲೆ ಎರಗುವಾಗ ಗಂಟೆಗೆ 100 ಮೈಲಿಗೂ ಹೆಚ್ಚು ವೇಗವಾಗಿ ಹಾರಬಲ್ಲದು.  ಸಣ್ಣ ಹಕ್ಕಿಗಳು ಸ್ವಲ್ಪ ಮಂದಗಾಮಿಗಳು, ಅಂದರೆ ಗಂಟೆಗೆ 20-25ಮೈಲಿಗಳ ವೇಗದಲ್ಲಿ ಹಾರುತ್ತವೆ.

	ಜ್ಞಾನೇಂದ್ರಿಯಗಳು :  ಹಕ್ಕಿಯ ಮಿದುಳು ಗಾತ್ರದಲ್ಲಿ ಚಿಕ್ಕದು.  ಆದರೂ ರಚನೆ ಮತ್ತು ಕ್ರಿಯೆಯಲ್ಲಿ ಬೇರೆ ಕಶೇರುಕಗಳ ಮಿದುಳಿನಂತೆಯೇ ಇದೆ.  ಜ್ಞಾನೇಂದ್ರಿಯಗಳಲ್ಲಿ ಕಣ್ಣು  ಮತ್ತು ಕಿವಿ ಚುರುಕಾಗಿದ್ದರೂ ಜ್ಞಾನೇಂದ್ರಿಯ ಅಷ್ಟು ಚುರುಕಲ್ಲ.  ಚೃಷ್ಟಿಗೆ ಸಂಬಂಧಿಸಿದ ಮಿದುಳಿನ ಹಾಲೆಗಳು ದೊಡ್ಡ ಗಾತ್ರದವಾಗಿವೆ.  ಹಕ್ಕಿಗಳ ಕಣ್ಣು ಜಟಿಲವಾದ, ಸಮರ್ಥವಾದ ಮತ್ತು ಅತ್ಯಂತ ಸೂಕ್ಷ್ಮವಾದ ಅಂಗವಾಗಿದ್ದು ಆಕಾಶದಲ್ಲಿ ವೇಗವಾಗಿ ಹಾರುವಾಗ ಬೇಕಾದ ದೃಷ್ಟಿಪಟುತ್ವ ಹೊಂದಿದೆ ಮತ್ತು ದೂರದ ವಸ್ತುವಿನಿಂದ ಸಮೀಪದ ವಸ್ತುವಿನ ಮೇಲೆ ತಕ್ಷಣದಲ್ಲಿ ನಾಭೀಕರಿಸಬಲ್ಲ ಸಾಮಥ್ರ್ಯ ಪಡೆದಿದೆ.  ಬಹುಪಾಲು ಹಕ್ಕಿಗಳಲ್ಲಿ ಕಣ್ಣುಗಳು ತಲೆಯ ಪಾಶ್ರ್ವಗಳಲ್ಲಿವೆ. ಒಂದೊಂದಕ್ಕೂ ಸ್ವತಂತ್ರವಾಗಿ ಕೆಲಸಮಾಡಬಲ್ಲ ಸಾಮಥ್ರ್ಯವಿರುವುದರಿಂದ ಒಕ್ಕಣ್ಣು ನೋಟ ಉಂಟು.  ಆದರೆ ಗೂಬೆಗಳಲ್ಲಿ ಎರಡು ಕಣ್ಣುಗಳೂ ಮುಂಭಾಗದಲ್ಲಿರುವುದರಿಂದ ಮನುಷ್ಯನಂತೆಯೇ ಇವುಗಳಲ್ಲಿ ಇಕ್ಕಣ್ಣು ನೋಟವಿದೆ.

	ಸಸ್ತನಿಗಳಲ್ಲಿ ಹೊರಕಿವಿ ಇದೆ.  ಆದರೆ ಹಕ್ಕಿಗಳಲ್ಲಿ ಇಲ್ಲ.  ಕಣ್ಣುಗಳ ಹಿಂಭಾಗದಲ್ಲಿ ಸ್ಥಿತವಾಗಿರುವ ಶ್ರವಣೇಂದ್ರಿಯ ರಂಧ್ರಗಳು ದೊಡವಾಗಿದ್ದರೂ, ಕಿವಿ ಹೊದಿಕೆಗಳೆಂಬ ವಿಶೇಷ ಗರಿಗುಚ್ಛದಿಂದ ಆವೃತವಾಗಿವೆ.  ಪಕ್ಷಿಗಳ ಶ್ರವಣ ಸಾಮಥ್ರ್ಯ ಬಲು ಚುರುಕಾಗಿದೆ.  ಉದಾಹರಣೆಗೆ ತ್ರಷ್ ಹಕ್ಕಿ ಭೂಮಿಯೊಳಗೆ ಹುದುಗಿರುವ ಹುಳುಗಳ ಚಲನೆಯನ್ನು ಪತ್ತೆಹಚ್ಚಬಲ್ಲದು.  ಅದಲ್ಲದೆ ಪೂರ್ತಿ ಕತ್ತಲಿರುವ ಗುಹೆಗಳಲ್ಲಿ ವಾಸಿಸುವ ದಕ್ಷಿಣ ಅಮೆರಿಕದ ತೈಲ ಪಕ್ಷಿಗಳು (ಆಯಿಲ್ ಬಡ್ರ್ಸ-ಸ್ವಿಯಟಾರ್ನಿಸ್) ಹಾರಾಡುವಾಗ ಗೋಡೆಗಳಿಗಾಗಲಿ, ಪರಸ್ಪರವಾಗಲೀ ಡಿಕ್ಕಿ ಹೊಡೆಯವು.  ಇದಕ್ಕೆ ಕಾರಣ ಹಾರಾಟದಲ್ಲಿ ಇವು ಮಾಡುವ ಅಲ್ಪ ಶಬ್ದಗಳ ಪ್ರತಿಧ್ವನಿಯ ಗ್ರಹಣ ಸಾಮಥ್ರ್ಯ.

	ಪಕ್ಷಿಗಳಲ್ಲಿ ಸೌಂದರ್ಯ ಜ್ಞಾನ ಚೆನ್ನಾಗಿ ರೂಪುಗೊಂಡಿದೆಯೆಂಬುದಕ್ಕೆ ಕೆಲವು ಹಕ್ಕಿಗಳ ಉಜ್ವ್ಜಲ ಹೊಳಪು ಬಣ್ಣಗಳೂ (ನವಿಲು, ಜೀವಂಜೀವ, ಸ್ವರ್ಗಪಕ್ಷಿ), ಬೇರೆ ಕೆಲವು ಪಕ್ಷಿಗಳ ಸುಶ್ರಾವ್ಯ ಸಂಗೀತವೂ (ಬುಲ್ಬುಲ್, ಕೋಗಿಲೆ, ಶಾಮ) ಉತ್ತಮ ಉದಾಹರಣೆಗಳೆನ್ನಬಹುದು. ಈ ವಿಷಯದಲ್ಲಿ ತನಗಾಗಿ ಪ್ರದರ್ಶಿತವಾದ ರೂಪ, ಸಂಗೀತಗಳನ್ನು ಹೆಣ್ಣು ಹಕ್ಕಿ ಗ್ರಹಿಸಿ ಅದರಿಂದ ಆಕರ್ಷಿತವಾಗಬಲ್ಲದೆಂದು ಹೇಳಬಹುದು.  ಹೆಣ್ಣು ಹಕ್ಕಿಗೆ ಆಹ್ವಾನವಾಗಿರುವುದಲ್ಲದೆ ಪಕ್ಷಿಗಾನ ಇನ್ನೊಂದು ಮುಖ್ಯ ಜೀವನಸಂಬಂಧದ ಉದ್ದೇಶ ಹೊಂದಿದೆ.  ಅದೇನೆಂದರೆ ಒಂದು ಗಂಡು ಹಕ್ಕಿ ಬೇರೆ ಗಂಡುಗಳಿಗೆ ಆ ಪ್ರದೇಶದಸ್ವಾಮ್ಯವನ್ನು ತಾನಾಗಲೇ ಪಡೆದಿರುವೆನೆಂದು ಪ್ರಚುರಪಡಿಸುವುದಲ್ಲದೆ, ಅವು ತನ್ನ ಹಕ್ಕನ್ನು ಉಲ್ಲಂಘಿಸದಂತೆ ಬೆದರಿಕೆ ಮತ್ತು ಎಚ್ಚರಿಕೆ ನೀಡುವುದು.

	ಸಂತಾನೋತ್ಪತ್ತಿ :  ಸಾಧಾರಣವಾಗಿ ಪಕ್ಷಿಗಳು ತಮ್ಮ ಗಾತ್ರಕ್ಕೆ ಅನುಗುಣವಾದ ತತ್ತಿಗಳನ್ನಿಡುತ್ತವೆ ಆದರೆ ಪ್ಲೋವರ್ ಮತ್ತು ಇತರ ನೀರು ಹಕ್ಕಿಗಳ ಮೊಟ್ಟೆಗಳು ನಿರೀಕ್ಷಿಸಬಹುದಾದುಕ್ಕಿಂತ ದೊಡ್ಡವು ಮತ್ತು ತನಗಿಂತ ಸಣ್ಣಹಕ್ಕಿಗಳ ಗೂಡುಗಳಲ್ಲಿ ಮೊಟ್ಟೆಯಿಡುವ ಕೋಗಿಲೆಯ ಮೊಟ್ಟೆ ಸಣ್ಣದು.  ಮೊಟ್ಟೆಗಳು ಗುಂಡಗೆ (ಗೂಬೆಗಳು) ಇಲ್ಲವೆ ಅಂಡಾಕಾರ (ನತ್ತಿಂಗ, ಗೌಜಲು ಹಕ್ಕಿ) ದೀರ್ಘ ವೃತ್ತ (ಸ್ವಿಫ್ಟ್) ಇಲ್ಲವೆ ಬುಗುರಿಯಾಕಾರ, (ಪ್ಲೋವರ್, ಪ್ರಪಾತಗಳ ಮೇಲೆ ಗೂಡುಕಟ್ಟುವ ಸಮುದ್ರದ ಹಕ್ಕಿಗಳು) ಮುಂತಾಗಿ ಭಿನ್ನವಾಗಿರುತ್ತವೆ.  ಬಿಲಗಳಲ್ಲಿಟ್ಟಾಗ ಮರೆ ದೊರೆಯುವುದರಿಂದ ಮೊಟ್ಟೆಗಳು ಬಿಳಿ ಬಣ್ಣದವಾಗಿರುವುವು.  ಮಿಕ್ಕ ಸನ್ನಿವೇಶಗಳಲ್ಲಿ ಸಾಧಾರಣವಾಗಿ ಮೊಟ್ಟೆಗಳ ಬಣ್ಣ ಸುತ್ತುಮುತ್ತಲಿನ ಬಣ್ಣದೊಡನೆ ಬೆರೆತುಹೋಗುವಂಥದ್ದು.  ತೆರೆದ ಗೂಡುಗಳೊಳಗೆ ಇಡಲ್ಪಟ್ಟಾಗ ಸುಲಭವಾಗಿ ಕಾಣದಿರುವಂತೆ ಬೇರೆ ಬೇರೆ ತರಹ ಗುರುತುಗಳಿಂದ ಕೂಡಿರುವುವು.  ಹಕ್ಕಿಗಳ ಗೂಡುಗಳು ಕೂಡ ರಚನೆ ಮತ್ತು ಸಾಮಗ್ರಿಗಳಲ್ಲಿ ಹೆಚ್ಚಿನ ವೈವಿಧ್ಯದಿಂದ ಕೂಡಿವೆ. ಸರಳ ರೀತಿಯಲ್ಲಿ ನೆಲ ತೋಡಿ ರಚಿಸಿದ ಗೂಡು (ಉದಾ : ಪ್ಲೋವರ್), ಮರಗಳಲ್ಲಿ ಕಡ್ಡಿಗಳ ಹಾಸಿಗೆಯಂತಿರುವ ಗೂಡು (ಉದಾ : ಕಾಗೆ) ಮುಂತಾದವುಗಳಿಂದ ಹಿಡಿದು ದಟ್ಟವಾಗಿ ನೇಯ್ದು ರಚಿಸಿದ ಗೀಜಗನ ಹಕ್ಕಿಗೂಡು, ಪ್ರಪಾತದ ಸ್ವಾಲೋ ಹಕ್ಕಿಯ ಸಾಮೂಹಿಕ ಮಣ್ಣು ಗೂಡುಗಳವರೆಗೆ ವ್ಯತ್ಯಾಸವನ್ನು ಕಾಣಬಹುದು.  ಒಂದು ಸಲಕ್ಕೆ ಇಡುವ ಮೊಟ್ಟೆಗಳ ಸಂಖ್ಯ ಒಂದರಿಂದ ಹಿಡಿದು (ಉದಾ : ಹಿಂಸ್ರ ಪಕ್ಷಿಗಳು) ಹತ್ತಕ್ಕಿಂತ ಹೆಚ್ಚಿನವರೆಗೆ (ಬಾತು ಮುಂತಾದ ಪಕ್ಷಿಗಳು).  ವ್ಯತ್ಯಾಸವಾಗಬಹುದು.  ಮೇಲೆ ಕೂಡುವ ತಾಯಿ ಅಥವಾ ತಂದೆ ಹಕ್ಕಿಯ ಮೈಕಾವಿನ ಸಹಾಯದಿಂದ ಇವು ಒಡೆಯುವುವು.  ಈ ರೀತಿ ಮೊಟ್ಟೆಯೊಡೆದು ಮರಿ ಹೊರಗೆ ಬರಲು 11-12 ದಿನ (ಗುಬ್ಬಚ್ಚಿ) ಗಳಿಂದ 60 ದಿನ (ಈಮ್ಯೂ)ಗಳವರೆಗೆ ಬೇಕಾಗುತ್ತದೆ.  ನ್ಯೂಜಿóóóóೀಲೆಂಡಿನ ಕೀವೀ ಹಕ್ಕಿಯ ಮೊಟ್ಟೆಯೊಡೆದು ಮರಿ ಹೊರಬರಲು 75 ದಿನ ಬೇಕಾಗುತ್ತದೆಂದು ಹೇಳಲಾಗಿದೆ.  ಆಸ್ಟ್ರೇಲಿಯದ ಮೆಗಪೋಡ್ ಹಕ್ಕಿಗಳು ಮರಳು ಮತ್ತು ಕೊಳೆಯುತ್ತಿರುವ ಎಲೆ, ಇವುಗಳ ರಾಶಿಗಳಲ್ಲಿ ಮೊಟ್ಟೆಗಳನ್ನು ಹುದುಗಿಸಿ ಇಡುವುವು.  ಇಲ್ಲಿ ಶಾಖದಿಂದ ಮೊಟ್ಟೆಗಳು ಒಡೆಯುವುವು.

	ಕೆಲವು ಬಗೆಯ ಹಕ್ಕಿಗಳಲ್ಲಿ ಮೊಟ್ಟೆಯೊಡೆದು ಹೊರಬರುಬ ಮರಿಗಳು ಕುರುಡಾಗಿದ್ದು  ಪುಕ್ಕಗಳಿಲ್ಲದೆ ಅಸಹಾಯ ಸ್ಥಿತಿಯಲ್ಲಿವುವು.  ಪುಕ್ಕಗಳು ಹುಟ್ಟಿಕೊಂಡು ಅವು ಗೂಡನ್ನು ಬಿಟ್ಟು ಹೋಗುವಷ್ಟು ಶಕ್ತಿಗಳಿಸುವವರೆಗೂ ತಂದೆ ತಾಯಿ ಹಕ್ಕಿಗಳೇ ಉಣಿಸನ್ನು ಕೊಟ್ಟು ಪೋಷಿಸುತ್ತವೆ.  ಇನ್ನು ಕೆಲವು ಪ್ರಭೇಧಗಳಲ್ಲಿ, ಉದಾಹರಣೆಗೆ ಕೋಳಿ ಮತ್ತು ಅದೇ ಗುಂಪಿನ ಬೇರೆ ಹಕ್ಕಿಗಳಲ್ಲಿ, ಮರಿಗಳು ಹುಟ್ಟುವಾಗ ಮೃದುವಾದ ಪಕ್ಕಗಳಿಂದ ಕೂಡಿದ್ದು, ಹುಟ್ಟಿದಕೂಡಲೇ ತಾಯಿ ಹಕ್ಕಿಯ ಹಿಂದೆ ಓಡಾಡಿ, ತಮ್ಮ ಆಹಾರ ಒದಗಿಸಿಕೊಳ್ಳವಷ್ಟು ತ್ರಾಣವುಳ್ಳವಾಗಿರುವುವು.

	ಪಕ್ಷಿವರ್ಗದ ಸಂಖ್ಯಾಬಲ : ಬಿಸಿರಕ್ತವಿರುವಿಕೆ ಮತ್ತು ಹಾರುವ ಸಾಮಥ್ರ್ಯ ಈ ಕಾರಣಗಳಿಂದ ಮಿಕ್ಕಿತರ ಪ್ರಾಣಿಗಳಿಗಿಂತ ಪಕ್ಷಿವರ್ಗ ಭೂಮಿಯ ಮೇಲೆ ಹೆಚ್ಚು ಭೌಗೋಳಿಕ ವಿಸ್ತರಣೆ ಹೊಂದಲೂ ಮತ್ತು ಮಹಾಸಾಗರಗಳಂಥ ತಡೆಗಳನ್ನೂ ದಾಟಿ ದೂರದ ಪ್ರದೇಶಗಳಲ್ಲೂ ಒಂಟೊಂಟಿಯಾದ ದ್ವೀಪಗಳಲ್ಲೂ ನೆಲೆಸಲೂ ಸಾಧ್ಯವಾಗಿದೆ.  ಅಲ್ಲದೆ ಸಹಿಸಲಸಾಧ್ಯವಾದ ಹವಾಮಾನದ ಪರಿಸ್ಥಿತಿಯಿಂದ ಸಕಾಲದಲ್ಲಿ ತಪ್ಪಿಸಿಕೊಂಡು ಅನುಕೂಲವಾದ ಹವಾಗುಣಗಳಿರುವ ಭೂಮಿಯ ಬೇರೆ ಭಾಗಗಳಿಗೆ ವಲಸೆ ಹೋಗಲೂ ಸಾಧ್ಯವಾಗಿದೆ.

	ಈಗ ಭೂಮಿಯಲ್ಲಿ ಜೀವಿಸುತ್ತಿರುವ ಪಕ್ಷಿಪ್ರಭೇದಗಳ ಒಟ್ಟು ಸಂಖ್ಯೆ ಸುಮಾರು 8,600 ಎಂದು ಅಂದಾಜು ಮಾಡಲಾಗಿದೆ.  ಇವುಗಳಲ್ಲಿ ಸುಮಾರು 29,000 ಉಪ ಪ್ರಭೇದಗಳು ಅಥವಾ ಭೌಗೋಳಿಕ ಕುಲಗಳುಂಟು.  ಭಾರತ ಮತ್ತು ಪಾಕಿಸ್ತಾನಗಳಲ್ಲಿ ಸುಮಾರು 1,200 ಪ್ರಭೇದಗಳು ಅಥವಾ 200 ಪ್ರರೂಪಗಳು ಇವೆ. ಇವುಗಳಲ್ಲಿ ಸುಮಾರು ಅರ್ಧದಷ್ಟು ಪ್ಯಾಸರಿಫಾರ್ಮೀಸ್ ಅಥವಾ ತರುವಿರಮಿಗಳು (ಪರ್ಚಿಂಗ್ ಬಡ್ರ್ಸ್) ಎಂಬ ಒಂದೇ ಗುಂಪಿಗೆ ಸೇರಿವೆ ; ಉದಾಹರಣೆ : ಗುಬ್ಬಚ್ಚಿ, ಕಾಗೆ, ಮೈನ, ಬುಲ್ ಬುಲ್ ಮತ್ತಿತರ ಸಣ್ಣ ಮತ್ತು ಮಧ್ಯಮ ಗಾತ್ರದ ಹಕ್ಕಿಗಳು.

	ಪ್ರಪಂಚದ ಪಕ್ಷಿ ಸಮುದಾಯವನ್ನು 27-28 ವರ್ಗಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ 22 ವರ್ಗಗಳ 88 ಕುಟುಂಬ ಮತ್ತು 11 ಉಪಕುಟುಂಬಗಳಿಗೆ ಸೇರಿದ ಹಕ್ಕಿಗಳು ಭಾರತದಲ್ಲಿವೆ.  

	ಭಾರತದಲ್ಲಿರುವ ಸುಮಾರು 350 ಪ್ರಭೇದ, ಉಪಪ್ರಭೇದಗಳೇ ವಲಸೆಗಾರ ಪಕ್ಷಿಗಳಾಗಿರುವುದರಿಂದ, ನಮ್ಮ ದೇಶದಲ್ಲಿ ಚಳಿಗಾಲದಲ್ಲಿ ಮಾತ್ರ ಅಂದರೆ ಅಕ್ಟೋಬರಿನಿಂದ ಮಾರ್ಚಿವರೆಗಿನ ಅವಧಿಯಲ್ಲಿ ಕಂಡುಬರುತ್ತವೆ.  ಕಾಡುಬಾತು, ವರಟೆ, ಕರಾವಳಿಯ ಮತ್ತು ನೀರಲ್ಲಿ ನಡೆದಾಡುವ ಹಕ್ಕಿಗಳು ಮತ್ತು ಫಿಂಚ್, ಟಿಟ್ಟಿಭ, ಪಿಪಿಟ್, ಕುಂಡೆಕುಸುಕ (ವ್ಯಾಗ್‍ಟೇಲ್) ಮತ್ತು ವಾಬ್ರ್ಲರ್ ಮುಂತಾದ ಅನೇಕಾನೇಕ ಸಣ್ಣ ಹಿಂಡುಗಾರ ಪಕ್ಷಿಗಳೂ ಈ ಗುಂಪಿಗೆ ಸೇರಿವೆ.

	ಭೌಗೋಳಿಕ ಹಂಚಿಕೆ :  ಭೂಮಿಯ ನಿರ್ದಿಷ್ಟ ಪ್ರದೇಶಗಳಿಗೆ ಮಿತಿಗೊಂಡ ವೈಶಿಷ್ಟ್ಯ ಪಡೆದಿರುವ ಪಕ್ಷಿವರ್ಗದ ಕೆಲವು ಕುಟುಂಬಗಳ ಹಂಚಿಕೆಯ ಆಧಾರದ ಮೇಲೆ, ವಿಜ್ಞಾನಿಗಳು ಭೂಮಿಯನ್ನು ಈ ಕೆಳಗೆ ಕಂಡಂತೆ ಆರು ಭೌಗೋಳಿಕ ವಲಯಗಳಾಗಿ ವಿಂಗಡಿಸಿದ್ದಾರೆ.  ಇಂಥ ಹಂಚಿಕೆಗೆ ಹವಾಗುಣ, ಭೌಗೋಳಿಕ, ಮತ್ತು ಪರಿಸರಕ್ಕೆ ಸಂಬಂಧಪಟ್ಟ ಕಾರಣಗಳೇ ಮೂಲವಾಗಿವೆ.

 ನಿಯಾರ್ಕಟಿಕ್ ವಲಯ :  ಉತ್ತರ ಅಮೆರಿಕದ ಬಹುಭಾಗ ಈ ವಲಯದಲ್ಲಿ ಸೇರಿಕೊಂಡಿದೆ.
ಇಲ್ಲಿನ ಪಕ್ಷಿವರ್ಗ ಕುಟುಂಬಗಳು. ಮಿಲಿಯಾಗ್ರಿಡೀ (ಟರ್ಕಿ ಕೋಳಿಗಳು), ಕೆಥಾರ್ಟಿಡೀ (ಹೊಸ ಪ್ರಪಂಚದ ರಣಹದ್ದುಗಳು).

	2. ಪೇಲಿಯಾರ್ಕಟಿಕ್ ವಲಯ :  ಯೂರೋಪ್, ವಾಯುವ್ಯ ಆಫ್ರಿಕ, ಕರ್ಕಾಟಕ ಸಂಕ್ರಾಂತಿ ವೃತ್ತದ ಉತ್ತರಕ್ಕಿರುವ ಏಷ್ಯಖಂಡದ ಭಾಗಗಳು ಮತ್ತು ಹಿಮಾಲಯದ ಉತ್ತರದ ಪ್ರದೇಶಗಳನ್ನೊಳಗೊಂಡಿದೆ.  ಬೇರೆ ಕೆಲವು ವಿಭಾಗಗಳಲ್ಲಿರುವ ಅನೇಕ ಕುಟುಂಬಗಳಿದ್ದಾಗ್ಯೂ ಪ್ರೂನೆಲ್ಲಿಡೀ (ಆಕ್ಷೆಂಟಾರ್) ಎಂಬ ಕುಟುಂಬ ಹಕ್ಕಿಗಳು ಮಾರ ಇಲ್ಲಿಗೆ ಮಾತ್ರ ಸೀಮಿತಗೊಂಡಿವೆ.

	ಈ ಎರಡು ವಲಯಗಳೂ ಅಕ್ಕಪಕ್ಕದಲ್ಲೇ ಇರುವುದರಿಂದ ಇವುಗಳ ಪಕ್ಷಿಸಮುದಾಯದಲ್ಲಿ ಬಹಳ ನಿಕಟ ಸಂಬಂಧ ಉಂಟು.  ಇವೆರಡೂ ಒಟ್ಟುಗೂಡಿ ಉತ್ತರಾರ್ಧಗೋಳದ ಹೆಚ್ಚು ಭಾಗವನ್ನು ಆವರಿಸಿವೆ. ಇವೆರಡನ್ನೂ ಒಟ್ಟಿಗೆ ಕೂಡಿಸಿ ಹೋಲಾರ್ಕ್‍ಟಿಕ್ ವಲಯವೆಂದು ಕರೆಯುದುಂಟು.

	3. ನಿಯೋಟ್ರಾಪಿಕಲ್ ವಲಯ :  ಮಧ್ಯ ಮತ್ತ ದಕ್ಷಿಣ ಅಮೆರಿಕ, ಟ್ರಾಕಿಲಿಡೀ_ಝೇಂಕಾರ ಹಕ್ಕಿಗಳು ಮುಂತಾದ ಅನೇಕ ವಿಜಾತೀಯ ಕುಟುಂಬಗಳ ಹಕ್ಕಿಗಳನ್ನು ಇಲ್ಲಿ ಕಾಣಬಹುದು.

	4. ಇಥಿಯೋಪಿಯನ್ ವಲಯ : ಏಷ್ಯ, ಉತ್ತರ ಆಫ್ರಿಕ (ವಾಯುವ್ಯದ ತುದಿಯನ್ನು ಬಿಟ್ಟು), ಮಡಗಾಸ್ಕರ್ ಮತ್ತು ಅರೇಬಿಯ.  ಇಲ್ಲಿಗೆ ಸೀಮಿತವಾಗಿರುವ ಕುಟುಂಬಗಳು : ಸ್ಟ್ರೂತಿಯಾನಿಡೀ (ಉಷ್ಟ್ರಪಕ್ಷಿಗಳು) ಇತ್ಯಾದಿ.

	5.  ಪೌರಸ್ತ್ಯ (ಓರಿಯಂಟಲ್) ವಲಯ :  (ಮುಖ್ಯವಾಗಿ ಹಿಮಾಲಯದ ದಕ್ಷಿಣ ಭಾಗ), ಫಿಲಿಪೀನ್ಸ್, ಮತ್ತು ಈಸ್ಟ್ ಇಂಡೀಸ್ ದ್ವೀಪಸ್ತೋಮದ ಬಹುಭಾಗ.  ಈ  ವಿಭಾಗದ ವಿಶೇಷ ಕುಟುಂಬಗಳು ಇಥಿಯೋಪಿಯನ್ ಮತ್ತು ಪೇಲಿಯಾರ್ಕಟಿಕ್ ವಲಯಗಳಲ್ಲೂ ಉಂಟು.  ಅಲ್ಲದೆ ಯೂರಿಲೇಮಿಡೀ (ಅಗಲ ಕೊಕ್ಕಿನ ಹಕ್ಕಿಗಳು)ಮತ್ತು ಫಿಲ್ಲಾರ್ನಿತಿಡೀ (ಕ್ಲೋರೋಪ್ಸ್ ಹಕ್ಕಿಗಳು) ಈ ವಿಭಾಗಕ್ಕೆ ಸೀಮಿತಗೊಂಡಿವೆ.  ಈ ವಲಯವನ್ನು ಮೂರು ಉಪ ವಿಭಾಗಗಳಾಗಿ ವಿಂಗಡಿಸಲಾಗಿದೆ :

ಅ) ಇಂಡಿಯನ್ :  ಹಿಮಾಲಯದ ದಕ್ಷಿಣಕ್ಕಿರುವ ಭಾರತ ಭಾಗ ಮತ್ತು ಶ್ರೀಲಂಕಾ
ಇಂಡೋ ಚೀನ :  ನೇಪಾಳದ ಪೂರ್ವಭಾಗ, ಭಾರತದ ವಾಯುವ್ಯ ಭಾಗ ಮತ್ತು ಪೂರ್ವ ಚೀನ, ಗಂಗಾ ಮುಖಜ ಪ್ರದೇಶದ ಪೂರ್ವಭಾಗ, ಆಗ್ನೇಯ ಏಷ್ಯದ ಭೂಭಾಗಗಳು (ಮಲಯ ಪರ್ಯಾಯ ದ್ವೀಪ ಹೊರತು) ಮತ್ತು ಫಾರ್ಮೋಸ, ಹೈನಾನ್ ಮತ್ತು ಅಂಡಮಾನ್ ದ್ವೀಪಗಳು.

ಇ) ಇಂಡೋ-ಮಲಯ ಅಥವಾ ಮಲೇಷಿಯ : ಮಲಯ ಪರ್ಯಾಯ ದ್ವೀಪ, ಮತ್ತು ಉಷ್ಣವಲಯದೊಳಗಿರುವ ಅಗದರೆ ಭೂಮಧ್ಯರೇಖೆಯ ಎರಡು ಕಡೆಗಳಲ್ಲೂ 10 ಡಿಗ್ರಿಗಳಷ್ಟು ಪ್ರದೇಶದಲ್ಲಿರುವ (ವೇಬರ್‍ರೇಖೆ ಎಂಬುದರ ಪೂರ್ವಕ್ಕಿರುವ) ದ್ವೀಪಗಳು.

	6.  ಆಸ್ಟ್ರೇಲಿಯನ್ ವಲಯ :  ಆಸ್ಟ್ರೇಲಿಯ, ನ್ಯೂಗಿನ ಮತ್ತು ವೇಬರ್‍ರೇಖೆ ಎನ್ನುವುದರ ಪೂರ್ವ ಭಾಗದ ಈಸ್ಟ್ ಇಂಡೀಸ್ ದ್ವೀಪಗಳು. ಇಲ್ಲಿ ಅನೇಕ ವಿಶೇಷ ಕುಟುಂಬಗಳು ಉಂಟು.  ಉದಾಹರಣೆಗೆ ಕ್ಯಾಸುವರೈಯಿಡೀ (ಕ್ಯಾಸೋವರಿ) ಡ್ರೋಮೈಡೀ (ಈಮ್ಯು), ಪ್ರಾರಡಿಸೈಡೀ (ಸ್ವರ್ಗದ ಪಕ್ಷಿಗಳು), ಮೆನ್ಯೂರಡೀ (ಕಿನ್ನರಿ ಹಕ್ಕಿಗಳು), ಮೆಲಿಫೇಗಿಡೀ (ಮಧುಭಕ್ಷಗಳು) ಮುಂತಾದವು.

	ಪೌರಸ್ತ್ಯ ವಲಯದಂತೆಯೇ ಬೇರೆ ವಲಯಗಳನ್ನೂ  ಪರಿಸರೀಯ ಕಾರಣಗಳ ಆಧಾರದ ಮೇಲೆ ಉಪವಿಭಾಗಗಳಾಗಿ ವಿಂಗಡಿಸಲಾಗಿದೆ.

	ಪಕ್ಷಿವರ್ಗದ ಉಪಯುಕ್ತತೆ :  ಪಕ್ಷಿಗಳ ರೂಪವರ್ಣಗಳ ಸೌಂದರ್ಯ, ಚಲನವಲನಗಳ ಪ್ರಫುಲ್ಲತೆ ಮತ್ತು ಹಾಡಿನ ಮಾಧುರ್ಯಗಳಿಂದ ಉಂಟಾಗುವ ಸಂತೃಪ್ತಿಯಿಲ್ಲದೆ, ಪಕ್ಷಿಗಳಿಂದ ಮನುಷ್ಯನಿಗೆ ಅಪಾರವಾದ ಪ್ರಯೋಜನವುಂಟು ; ಅದರಲ್ಲೂ ಕೃಷಿ ಮತ್ತು ಅರಣ್ಯ ಸಂಪತ್ತಿಗೆ ಹೆಚ್ಚ ಪ್ರಾಮುಖ್ಯ ಇರುವ ಭಾರತ ಮುಂತಾದ ದೇಶಗಳಲ್ಲಿ ಇವುಗಳ ಪಾತ್ರ ಮಹತ್ವದ್ದು.  ಅನೇಕ ಹಕ್ಕಿಗಳು ಪೈರುಗಳಿಗೆ, ಚೌಬೀನೆಯ ಮರಗಳಿಗೆ ಮತ್ತು ಬೇರೆ ಸಸ್ಯಗಳಿಗೆ ಅಪಾರವಾದ ಹಾನಿಯುಂಟು ಮಾಡುವ ಕ್ರಿಮಿಕೀಟಗಳನ್ನು ಆಹಾರವನ್ನಾಗಿ ಭಕ್ಷಿಸುತ್ತವೆ.  ಇದರಿಂದ ಹೊಟ್ಟೆಬಾಕಗಳಾದ ಹಾಗೂ ಬಹುಸಂತಾನ ಸಾಮಥ್ರ್ಯದಿಂದ ಕೂಡಿದ ಕೀಟಗಳಿಂದ ಭೂಮಿಯ ಮೇಲೆ ಮನುಷ್ಯಜಾತಿಯ ಅಸ್ತಿತ್ವಕ್ಕೇ ಧಕ್ಕೆಯುಂಟಾಗಬಹುದಾದ ಪರಿಸ್ಥಿüತಿಗೆ ಪರಿಣಾಮಕಾರಿಯಾದ ತಡೆ ಹಾಡದಂತಾಗಿದೆ.  ಅಂತೆಯೇ ಬೆಳೆಗಳಿಗೆ ಮತ್ತು ದಾಸ್ತಾನು ಮಾಡಿದ ದವಸಧಾನ್ಯಗಳಿಗೆ ಭಾರಿ ಪೀಡೆಯಾಗಿರುವ ಮತ್ತು ಮನುಷ್ಯನಿಗೆ ಅತ್ಯಂತ ಮಾರಕವಾಗಬಹುದಾದ ರೋಗರುಜಿನಗಳ ಸೋಂಕನ್ನು ಹರಡುವ ಮೂಷಿಕವರ್ಗ ಮತ್ತಿತರ ಪಿಡುಗುಗಳ ಸಂಖ್ಯೆಯನ್ನು ಮಿತಿಗೊಳಿಸುವುದರ ಮೂಲಕ ಬೇಟೆಗಾರ ಪಕ್ಷಿಗಳು ಮತ್ತು ಗೂಬೆಗಳು ಮನುಷ್ಯನಿಗೆ ಉಪಕಾರ ಮಾಡುತ್ತಿವೆ.

	ಮನುಷ್ಯನಿಗೆ ಆಹಾರ ಒದಗಿಸುವ ದೃಷ್ಟಿಯಿಂದ ಅನಾದಿ ಕಾಲದಿಂದ ಪಕ್ಷಿಗಳ ಬೇಟೆ ಹಾಗೂ ಸಾಕಣೆ ಮನುಷ್ಯನ ಮುಖ್ಯ ಕಸುಬುಗಳಲ್ಲಿ ಒಂದೆನಿಸಿದೆ, ಉದಾಹರಣೆಗೆ ಕೋಳಿಸಾಕಣೆ ಪ್ರಪಂಚದ ಅನೇಕ ಭಾಗಗಳಲ್ಲಿ ದೊಡ್ಡಪ್ರಮಾಣದ ಕೈಗಾರಿಕೆಯೇ ಆಗಿದೆ. ಪಕ್ಷಿಗಳಬೇಟೆ ಲಕ್ಷಾಂತರ ಜನರಿಗೆ ಆಹ್ಲಾದಕರವಾದ ಕ್ರೀಡೆಯಾಗಿದೆ.  ಅಲ್ಲದೆ ಅಮೆರಿಕದಂಥ ಕೆಲವು ದೇಶಗಳಲ್ಲಿ ರಾಷ್ಟ್ರೀಯ ಬೊಕ್ಕಸಕ್ಕೆ ಹೆಚ್ಚಿನ ಆದಾಯವನ್ನೂ ಒದಗಿಸುತ್ತವೆ.  ಪೆರುದೇಶದ ಸಮುದ್ರತೀರದ ಆಚೆಗಿರುವ ಕೆಲವು ದ್ವೀಪಗಳಲ್ಲಿ ದಪ್ಪ ದಪ್ಪ ಪದರಗಳಲ್ಲಿ ಶೇಖರಣೆಯಾಗುವ ಮತ್ಸ್ಯಭಕ್ಷಕ ಸಮುದ್ರ ಪಕ್ಷಿಗಳ ಉಚ್ಚಿಷ್ಠ ಗ್ವಾನೋ ಎಂಬುದು ಅತ್ಯಮೂಲ್ಯವಾದ ಗೊಬ್ಬರವೆಂದು ಹೆಸರಾಗಿದೆ.  ಪೆರು ಮತ್ತು ಚಿಲಿ ದೇಶಗಳಲ್ಲಿ ಇದು ರಾಷ್ಟ್ರೀಯ ಉದ್ಯಮವಾಗಿದ್ದು ಆ ದೇಶಗಳಿಗೆ ಭಾರಿ ಪ್ರಮಾಣದಲ್ಲಿ ಲಾಭ ದೊರಕಿಸಿಕೊಡುತ್ತಿದೆ.

	ಇನ್ನೂ ಅನೇಕ ರೀತಿಗಳಲ್ಲಿ ಮಾನವನ ಜೀವನದಲ್ಲಿ ಪಕ್ಷಿವಗೃಕ್ಕೆ ಆರ್ಥಿಕ ಮಹತ್ತ್ವವುಂಟು.  ಈ ಸಂಬಂಧ ಮನುಷ್ಯನಿಗೆ ಎಲ್ಲ ಸಂದರ್ಭಗಳಲ್ಲೂ ಉಪಯುಕ್ತವೆಂದೇ ಅಲ್ಲ.  ಉದಾಹರಣೆಗೆ ಹಕ್ಕಿಗಳು ಬೆಳೆಗಳನ್ನೂ ತೋಟಗಳನ್ನೂ ದಾಳಿ ಮಾಡಿದಾಗ ಅಪಾರ ನಷ್ಟವುಂಟಾಗುವುದು.  ಇದು ಅತಿರೇಕಕ್ಕೆ ಹೋದ ಸಂದರ್ಭಗಳಲ್ಲಿ ಅತ್ಯಂತ ಭಾರಿ ಪ್ರಮಾಣದಲ್ಲಿ ನಷ್ಟವಾಗಬಹುದು.  ಪಶ್ಚಿಮ ಆಫ್ರಿಕದ ಫ್ರೆಂಚ್ ವಸಾಹತುಗಳಲ್ಲಿ ಕಪ್ಪುಮುಖದ ಗೀಜಗ ಹಕ್ಕಿ(ಕ್ವೆಲಿಯ ಕ್ವೆಲಿಯ) ಮಿಡತೆಯಂತೆ ತಂಡೋಪತಂಡ ಸಂಖ್ಯಗಳಲ್ಲಿ ಬತ್ತದ ಗದ್ದೆಗಳ ಮೇಲೆ ದಾಳಿ ನಡೆಸುವುದರಿಂದ ಅಲ್ಲಿನ ಸರ್ಕಾರಕ್ಕೆ ಭಾರಿ ಸಮಸ್ಯೆಯಾಗಿದೆ.  ಆದರೆ ಎಲ್ಲ ವಿಷಯಗಳನ್ನೂ ಗಮನಿಸಿ ನೋಡಿದರೆ ಪಕ್ಷಿಗಳಿಂದಾಗುವ ಉಪಕಾರ, ಅವುಗಳಿಂದಾಗುವ ಹಾನಿಗಿಂತ ಹೆಚ್ಚಿನದೆಂದು ವೇದ್ಯವಾಗುತ್ತದೆ.  ಆದ್ದರಿಂದ ಕೆಲವು ಅಪಾಯಕರಜಾತಿಗಳನ್ನು ಉಳಿದು, ಪಕ್ಷಿವರ್ಗ ಮಾನವ ನೀಡಬಲ್ಲ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ಅರ್ಹತೆ ಪಡೆದಿದೆಯೆಂದು ನಿಸ್ಸಂದೇಹವಾಗಿ ಹೇಳಬಹುದು.
(ಎಸ್.ಎ.ಎಲ್.)
(ಪರಿಷ್ಕರಣೆ: ಕೆ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ